ಮಲ್ಲಪ್ಪ, ಸಿ ಬಿ
1887-1959 ಕನ್ನಡ ರಂಗಭೂಮಿಯ ಸುಪ್ರಸಿದ್ಧ ನಟ. ಸುಮಾರು ಐದು ದಶಕಗಳಷ್ಟು ದೀರ್ಘಕಾಲ ಭಕ್ತಿರಸಪ್ರಧಾನವಾದ ಪಾತ್ರಗಳನ್ನು ಅಭಿನಯಿಸಿದ ಕೀರ್ತಿ ಇವರದು. ಹುಟ್ಟಿದ್ದು ಚಿಕ್ಕನಾಯಕನ ಹಳ್ಳಿಯಲ್ಲಿ.

ತಂದೆ ಬಯಲಾಟ ಭಾಗವತ ಸಿದ್ದಪ್ಪ : ತಾಯಿ ಗಂಗಮ್ಮ ಚಿಕ್ಕಂದಿನಲ್ಲಿಯೇ ಬಯಲಾಟದಲ್ಲಿ ಆಸಕ್ತಿ ತಳೆದ ಇವರು ಆಗಾಗ್ಗೆ ವೇಷಧರಿಸುತ್ತಿದ್ದರು. ತಂದೆಯಿಂದ ಮಲ್ಲಪ್ಪನವರಿಗೆ ಸಂಗೀತದ ಗೀಳು ಬಳುವಳಿಯಾಗಿ ಬಂತು. ಮಾಟವಾದ ಮೂಗು ಮಲ್ಲಪ್ಪನವರಿಗಿದ್ದುದರಿಂದ ಸ್ತ್ರೀಪಾತ್ರ ವಹಿಸುವಲ್ಲಿ ಸಹಕಾರಿಯಾಯಿತು. ಚಿಕ್ಕಂದಿನಲ್ಲಿಯೇ ಇವರಿಗೆ ಸಂಗೀತ ಮತ್ತು ಅಭಿನಯ ಕಲೆಗಳಲ್ಲಿ ಒಳ್ಳೆಯ ತರಬೇತಿ ದೊರೆಯಿತು. ಸು. 1897ರಲ್ಲಿ ಕನ್ನಡ ರಂಗ ಭೂಮಿಯನ್ನು ಪ್ರವೇಶಿಸಿದ ಇವರು ನಾಟಕ ಕಂಪನಿಯೊಂದರಲ್ಲಿ ಸುಮಾರು ಏಳು ವರ್ಷಗಳ ಕಾಲವಿದ್ದರು. ಅನಂತರ ಶ್ರೀಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘವನ್ನು ಪ್ರವೇಶಿಸಿದ ಇವರು, ಅಲ್ಲಿ ಮೊದಮೊದಲು ಸ್ತ್ರೀ ಪಾತ್ರಗಳನ್ನು ಅನಂತರ ಇತರ ಪಾತ್ರಗಳನ್ನು ಅಭಿನಯಿಸಿ ಹೆಸರು ಮಾಡಿದರು. 1921ರಲ್ಲಿ ಜಿ.ಎಚ್. ವೀರಣ್ಣನವರ ಜೊತೆಯಲ್ಲಿ ಗುಬ್ಬಿ ಕಂಪನಿಯ ಒಡೆಯರೂ ಆದರು. ಈ ಕಂಪನಿ ಪ್ರದರ್ಶಿಸಿದ ಕಬೀರದಾಸ; ಸತ್ಯ ಹರಿಶ್ಚಂದ್ರ; ತುಕಾರಾಮ್, ತುಳಸೀದಾಸ ಮೊದಲಾದ ಭಕ್ತಿರಸ ನಾಟಕಗಳಲ್ಲಿ ಪ್ರಧಾನಪಾತ್ರಗಳನ್ನು ಅಭಿನಯಿಸಿ ಆ ಪಾತ್ರಗಳಿಗೆ ಸಂಬಂಧಿಸಿದ ಗೀತೆಗಳನ್ನು ಹಾಡಿ, ಒಳ್ಳೆಯ ಜನಪ್ರಿಯತೆಯನ್ನು ಗಳಿಸಿಕೊಂಡರು. ಮಲ್ಲಪ್ಪನವರು ಹಾಡುತ್ತಿದ್ದ `ಹಣವೇ ನಿನ್ನಯ ಗುಣ` ಎಂಬ ಹಾಡು ಮದರಾಸಿನ ಕೊಲಂಬಿಯಾ ಧ್ವನಿಮುದ್ರಿಕೆ ಸಂಸ್ಥೆಯಿಂದ ಧ್ವನಿಮುದ್ರಿತವಾಗಿ ಜನಪ್ರಿಯವಾಗಿದೆ. ಮಲ್ಲಪ್ಪನವರ ಅಭಿನಯ ಪ್ರಸಿದ್ಧಿಯನ್ನು ಕೇಳಿ 1924ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಜಗನ್ಮೋಹನ ಅರಮನೆಯಲ್ಲಿ ಮಲ್ಲಪ್ಪನವರಿಂದ ಕಬೀರದಾಸ ನಾಟಕವನ್ನಾಡಿಸಿ ತಮ್ಮ ಮೆಚ್ಚುಗೆಯ ಕುರುಹಾಗಿ ಸುವರ್ಣ ಪದಕವನ್ನು ಬಹುಮಾನವನ್ನಾಗಿತ್ತು ಗೌರವಿಸಿದ್ದರು.

ಮಲ್ಲಪ್ಪನವರು 1927ರಲ್ಲಿ ಗುಬ್ಬಿ ಕಂಪನಿಯನ್ನು ಬಿಟ್ಟು ದೊಡ್ಡಬಳ್ಳಾಪುರದ ಅಮಾವಾಸ್ಯೆ ನಂಜುಂಡಯ್ಯನವರ ಕಂಪನಿಯ ಪಾಲುದಾರರಾದರು. ನಂಜುಂಡಯ್ಯನವರ ನಿಧನಾನಂತರ (1929) ಆ ಕಂಪನಿಯ ಮಾಲೀಕರಾದರು. ಆ ಕಂಪನಿಯೇ ಮುಂದೆ ಚಂದ್ರಮೌಳೇಶ್ವರ ನಾಟಕ ಸಭಾ ಎಂಬ ಹೆಸರಿನಿಂದ ಸುಮಾರು ಕಾಲು ಶತಮಾನದತನಕ ಅತ್ಯಂತ ವೈಭವದಿಂದ ಮೆರೆದು ಕಲಾಸೇವೆ ನಡೆಸಿ ಕನ್ನಡಿಗರ ಅಭಿಮಾನಕ್ಕೆ ಪಾತ್ರವಾಯಿತು. ತಮ್ಮ ಆಡಳಿತಕ್ಕೆ ಕಂಪನಿ ಬಂದ ಅನಂತರ ನವೀನ ರೀತಿಯ ಅನೇಕ ನಾಟಕಗಳನ್ನು ಪ್ರದರ್ಶಿಸಿ ಕಂಪನಿಯ ಆದಾಯವನ್ನು ಹೆಚ್ಚಿಸಿದರು. ತಮಿಳುನಾಡಿನಲ್ಲೂ ತಮ್ಮ ನಾಟಕಗಳನ್ನು ಪ್ರದರ್ಶಿಸಿದರು. ಮಲ್ಲಪ್ಪನವರು ಭಕ್ತಿರಸಪ್ರಧಾನ ನಾಟಕಗಳಲ್ಲಿ ತೋರುತ್ತಿದ್ದ ಭಾವಪೂರ್ಣ ಅಭಿನಯವನ್ನು ಕಂಡು ಕಲಾಪ್ರೇಮಿಗಳು ಮಂತ್ರಮುಗ್ಧರಾದರು. ಇದರಿಂದ ಪ್ರಭಾವಿತರಾದ ಅಲ್ಲಿಯ ಕಲಾರಸಿಕರು, ವಿದ್ವಜ್ಜನರು, ಅಧಿಕಾರಿಗಳು ಸೇರಿ ಬೃಹತ್ ಸಮಾರಂಭವನ್ನು ಏರ್ಪಡಿಸಿ ಮಲ್ಲಪ್ಪನವರು ಹಾಗೂ ಅವರ ನಟವರ್ಗದವರನ್ನು ಆಹ್ವಾನಿಸಿ ಮನಸಾರೆ ಹೊಗಳಿದರು. ಅವರು ತಮ್ಮ ಪ್ರೀತಿಯ ದ್ಯೋತಕವಾಗಿ ಅಭಿನವ ಭಕ್ತಶಿರೋಮಣಿ ಎಂಬ ಬಿರುದನ್ನಿತ್ತು ಗೌರವಿಸಿದರು; ಸುವರ್ಣ ಪದಕ ತೊಡಿಸಿದರು. ಅಂದಿನಿಂದ ಆ ಬಿರುದು ಮಲ್ಲಪ್ಪನವರ ಹೆಸರಿನ ಜೊತೆ ಶಾಶ್ವತವಾಗಿ ಉಳಿಯಿತು.

ಮಲ್ಲಪ್ಪನವರು, ಭಕ್ತಿ, ಶೋಕ, ಹಾಗೂ ಕರುಣರಸಗಳ ಪಾತ್ರಗಳನ್ನು ಪ್ರಧಾನವಾಗಿ ವಹಿಸುತ್ತಿದ್ದರೂ ಅಷ್ಟೇ ಸಮರ್ಥರಾಗಿ ಅಭಿನಯಿಸುತ್ತಿದ್ದರು. 

ಸಂಪೂರ್ಣರಾಮಾಯಣದಲ್ಲಿ ದಶರಥ, ರಾವಣ; ಸತ್ಯ ವಿಜಯನ ನಾಟಕದಲ್ಲಿ ಸಾಹುಕಾರನಮಗ; ಪ್ರಭಾಮಣಿ ವಿಜಯದಲ್ಲಿ ಕನಕ ಸುಂದರ; ವೀರ ಸಾಂಬಾಜಿಯಲ್ಲಿ ಸಾಂಬಾಜಿ ಪಾತ್ರ; ಶಿಶುಪಾಲವಧೆಯಲ್ಲಿ ಶಿಶುಪಾಲನ ಪಾತ್ರ; ಜರಾಸಂಧವಧೆಯಲ್ಲಿ ಜರಾಸಂಧನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿ ಕಲಾವಿದರ ಮೆಚ್ಚುಗೆ ಗಳಿಸಿದ್ದರು.

ಕೀರ್ತಿಶ್ರೀ ಮಲ್ಲಪ್ಪನವರನ್ನು ಅರಸಿ ಬಂದಿತು, ಮಹಾರಾಜರು ಕಲಾಪ್ರೇಮಿಗಳು ಇವರಿಗೆ ಅನೇಕ ಬಿರುದು ಬಾವಲಿಗಳನ್ನಿತ್ತು ಗೌರವಿಸಿದರು. ಇವರಿಗೆ ಸಂದ ಪದಕ - ಪ್ರಶಸ್ತಿಗಳ ದೊಡ್ಡ ಪಟ್ಟಿಯೇ ಇದೆ. 1924ರಲ್ಲಿ ಮೈಸೂರಿನಲ್ಲಿ ಸಂದ ಚಿನ್ನದ ಕತ್ತಿ, 1930ರಲ್ಲಿ ಅರಸೀಕೆರೆಯಲ್ಲಿ ಕೊಟ್ಟ ಹನ್ನೆರಡು ತೊಲದ ಚಿನ್ನದ ಚೈನು, 1931ರಲ್ಲಿ ಚಿಕ್ಕಮಗಳೂರಿನಲ್ಲಿ ಕೊಟ್ಟ ಬೆಳ್ಳಿ ಚರಕ ಹೆಸರಿಸತಕ್ಕಂಥವು.

ಕಬೀರದಾಸ ಎಂಬ ಮೂಕ ಚಿತ್ರದಲ್ಲಿ ಮಲ್ಲಪ್ಪನವರು ಕಬೀರನ ಪಾತ್ರವಹಿಸಿದ್ದಾರೆ. ಗುಬ್ಬಿ ಕರ್ನಾಟಕ ಫಿಲಮ್ಸ್ ಅವರ ಹೇಮರೆಡ್ಡಿ ಮಲ್ಲಮ್ಮ ಕನ್ನಡ ಚಿತ್ರದಲ್ಲಿ ಹೇಮರೆಡ್ಡಿಯ ಪಾತ್ರವಹಿಸಿ ಚಿತ್ರ ಜಗತ್ತಿನ ಕೀರ್ತಿಗೂ ಪಾತ್ರರಾಗಿದ್ದಾರೆ.

ಸ್ನೇಹಶೀಲರೂ ಉದಾರಿಗಳೂ ಆಗಿದ್ದ ಮಲ್ಲಪ್ಪನವರು ತಮ್ಮ ಸಹ ಕಲಾವಿದರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡರಲ್ಲದೆ, ತಮ್ಮ ಆದಾಯದ ಬಹುಪಾಲನ್ನು ಬಡ ವಿದ್ಯಾರ್ಥಿಗಳಿಗೆ, ಅನೇಕ ಸಂಘ ಸಂಸ್ಥೆಗಳಿಗೆ ದಾನಮಾಡಿದರು. ತಮ್ಮ ಕೊನೆಯ ದಿನಗಳನ್ನು ಚಿಕ್ಕನಾಯಕನ ಹಳ್ಳಿಯಲ್ಲಿ ಕಳೆದ ಮಲ್ಲಪ್ಪನವರು 73ನೆಯ ವಯಸ್ಸಿನಲ್ಲಿ 1959ರ ಏಪ್ರಿಲ್ 3ರಂದು ತೀರಿಕೊಂಡರು.										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ